ಸುವರ್ಣ ವಾಹಿನಿಯ ವಾರ್ತಾ ವಾಹಿನಿಯ ಕಾರ್ಯಕ್ರಮ "ಭರತ ಮಾತು"
ಈ ಪತ್ರದ ಉದ್ದೇಶ, ಸುವರ್ಣ ವಾಹಿನಿಯ ಕಾರ್ಯ ನಿರ್ವಾಹಕರಿಗಾಗಲೀ, ಡಾ|| ಭರತ ಚಂದ್ರ ರವರಿಗಾಗಲೀ, ಅವಮಾನ, ಕಸಿವಿಸಿ ಮಾಡುವಂತಹ ಉದ್ದೇಶವಲ್ಲ.
ಇದೇ ಡಾ|| ಭರತ್ ಚಂದ್ರರವರು ಕಳೆದ ವರ್ಷ 2010 ಆಗಸ್ಟ್ ತಿಂಗಳಿನಲ್ಲಿ ಟಿ.ವಿ-9ನ ಶ್ರೀಮತಿ ರಾಧಿಕಾರಾಣಿಯವರು ನಡೆಸಿಕೊಡುವ "ಲೇಡಿಸ್ ಕ್ಲಬ್" ಎಂಬ ಕಾರ್ಯಕ್ರಮದಲ್ಲಿ "ಹಣ ದ್ವಿಗುಣ" ಹಾಗೂ " ಶೇರು ಮಾರುಕಟ್ಟೆಯಲ್ಲಿ ಹಣ ಮಾಡೋದು ಹೇಗೆ" ಎಂಬ ಎರಡು ಕಂತುಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
ಅವರ ಮಾತುಗಳ ಮೋಡಿಗೆ ಪ್ರತಿಯೊಬ್ಬರೂ ತಲೆ ತೂಗುತ್ತಾರೆ.ಅಚ್ಚುಕಟ್ಟಾದ ಮಾತಿನ ಶೈಲಿಯಿಂದ ನೋಡುವ, ಕೇಳುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತಾರೆ. ಅದು ಅವರ ಕಲೆ. ಅದಕ್ಕೆ ನನ್ನ ಪ್ರಣಾಮಗಳು.
ಲೇಡಿಸ್ ಕ್ಲಬ್ ಕಾರ್ಯಕ್ರಮದಲ್ಲಿ "ಹಣ ದ್ವಿಗುಣ" ಮತ್ತು "ಶೇರು ಮಾರುಕಟ್ಟೆಯಲ್ಲಿ ಹಣ ಮಾಡೋದು ಹೇಗೆ" ಎಂಬ ಮಾತಿನಿಂದ ಪ್ರಬಾವಿತನಾಗಿ ಕಾರ್ಯಕ್ರಮದಲ್ಲಿ ಅವರೇ ಹೇಳುವಂತೆ "ಉಚಿತ ಸೆಮಿನಾರ್"ಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಎಲ್ಲಾ ಯುವಕರು, ಮಹಿಳೆಯರು, ವಯಸ್ಸಾದವರೂ ಇದರಲ್ಲಿ ಭಾಗವಹಿಸಿ, ರೇಕಾರ್ಡ್ ಮಾಡಿಕೊಂಡು ತಮ್ಮ ಮನೆಯವರಿಗೆ ಕೆಳಿಸಿ, ಸೆಮಿನಾರ್ ಗೆ ಕರೆತನ್ನಿ ಎಂಬ ಮಾತುಗಳನ್ನು ಆಡುತ್ತಾರೆ.
ಅದರಂತೆಯೇ ನಾನು ನನ್ನ ಗೆಳೆಯರು ಅವರು ಕೊಟ್ಟಿದ್ದ ಮೊಬೈಲ್ ನಂಬರಿಗೆ ಫೋನ್ ಮಾಡಿದಾಗ "ಬೆಂಗಳೂರಿನ ರೈಲ್ವೆ ಸ್ಟೇಷನ್ ಬಳಿ ಇರುವ "ಬೆಲ್" ಹೋಟೆಲ್" ನಲ್ಲಿ ಸೆಮಿನಾರ್ ಇದೆ ಸಂಜೆ 6ಕ್ಕೆ ಬನ್ನಿ ಎಂಬ ಆಮಂತ್ರಣ.
ಅವರಂತೆ ನಾವು ದಾವಣಗೆರೆಯಿಂದ ಹೊರಟೆವು. ಬೆಂಗಳೂರಿಗೆ. ಸಂಜೆ 6 ಕ್ಕೆ ಸೆಮಿನಾರ್ ಪ್ರಾರಂಭ "ಬೆಲ್ ಹೋಟೆಲ್" ನ ಕಾಫಿ ಯೊಂದಿಗೆ, ಸುಮಾರು 2 ವರೆ ಗಂಟೆಗಳ ಕಾಲ ಸನ್ಮಾನ್ಯಶ್ರೀ ಡಾ|| ಭರತ್ ಚಂದ್ರರವರ ಮಾತುಗಳು ನಮಗೆ ಉಚ್ಚೆಗೆ ಅವಸರ ಆದರೂ ಹೋಗದೇ ಮಾತು ಎಲ್ಲಿ ತಪ್ಪಿ ಹೋಗುತ್ತೋ ಅನ್ನೋ ಕಾರಣಕ್ಕೆ ಸಂಪೂರ್ಣವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಕುಳಿತೆವು.
ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ 6 ರೂ ಇದ್ದ ಸೆಸಾ ಗೋವಾ ಶೇರು ಇಂದು (ಕಳೆದ ವರ್ಷದಅಂದಿನ ಮಾರುಕಟ್ಟೆ ಬೆಲೆ) 360 ರೂ ಇದೆ ಎಷ್ಟು ಪಟ್ಟು ಜಾಸ್ತಿಯಾಗಿದೆ, (ಅದೇ ಸೆಸಾ ಗೋವಾ ಶೇರು ಇಂದು 200ರ ಗಡಿಯಲ್ಲಿದೆ)ಮನೆಯಲ್ಲಿ ಹಣ ಇಟ್ಟರೆ ಏನು ಬರುತ್ತೆ ಅದಕ್ಕೆ ಹೂಡಿ, ಇದಕ್ಕೆ ಹೂಡಿ, ಆ ಷೇರು, ಈ ಷೇರು ಅಂತ ಹೇಳಿ, ಆಸೆಯ ಮೂಟೆಗಳನ್ನು ಬೆನ್ನಿಗೆ ಏರಿಸುತ್ತಾ, ನೆರೆದಿದ್ದ ನನಗೆ ಅದೆಷ್ಟು ಚೆನ್ನಾಗಿ ಮಾತಾನಾಡುತ್ತಾರೆ. ಡಾ|| ಭರತ್ ಚಂದ್ರರವರು, ಇವರಿಂದ ನಮ್ಮ ಬಾಳು ಬೆಳಕಾಗಬಹುದು. ಜೀವನಕ್ಕೆ ಒಂದು ಸಿಕ್ಕಿದಂತಾಯಿತು. ಅನ್ನೋ ಭ್ರಮೆ ಆ ಎರಡು ವರೆ ಗಂಟೆಯೊಳಗೆ ನಮ್ಮ ತಲೆಯೊಳಗೆ ತೋರಿ ತೇಲಾಡುತ್ತಿತ್ತು. ಷೇರುಗಳ ಬಗ್ಗೆ ಅವುಗಳ ಮಾಡಿದ ಲಾಭಗಳ ಬಗ್ಗೆ ಶೇಕಡಾವಾರು ವರ್ಷಕ್ಕೆ 4-5 ಬಾರಿ ಲಾಭ ಮಾಡಬಹುದು, 2 ಸಾವಿರದಿಂದಲೂ ಶೇರು ವ್ಯವಹಾರ ಪ್ರಾರಂಭಿಸಬಹುದು. ತಾವು ಲಕ್ಷಾಂತರ ರೂ ಬ್ರೋಕರ್ ಗಳ ಮಾತುಗಳನ್ನು ನಂಬಿ, ಅವರಿಗೆ ಹಣ ಕೊಟ್ಟು ಕಳೆದುಕೊಂಡಿದ್ದೇನೆ. ಈಗ ನಾನೇ ಇದರಲ್ಲಿ ತೊಡಗಿಸಿಕೊಳ್ಳುತ್ತಾ ಶೇರು ಮಾರುಕಟ್ಟೆಯ ಬೋಧನೆ ಮಾಡುತ್ತೇನೆ. ಈ ದೇಶ, ಆದೇಶ ಅದದಲ್ಲಿ ಸೆಮಿನಾರ್ ಮಾಡಿದೆ ಅಂತ ಹೇಳಿಕೊಂಡು ಕೊನೆಗೆ ಈ ಎಲ್ಲಾ ಡಿಗ್ರಿಗಳಿಗೂ ಒಂದು ಕಾಲೇಜು ಇರುತ್ತೆ. ಹಣ ಮಾಡುವ ಬಗ್ಗೆ, ಶೇರು ಮಾರುಕಟ್ಟೆಯ ಬಗ್ಗೆ ತಿಳಿಸಲು ಟ್ರೈನಿಂಗ್ ಕೊಡುವವರು ಯಾರಾದಾರೂ ಇದ್ದಾರೆಯೇ? ಅದಕ್ಕೆ ನಾವಿದ್ದೇವೆ. 7,500 ರೂ ಕೊಟ್ಟು 2 ದಿನಗಳ ವರ್ಕ್ ಷಾಪ್ ಗೆ ಸೇರಿಕೊಂಡರೆ ತಾವೇ ಬರೆದ ಪುಸ್ತಕಗಳ ಗಿಫ್ಟ್ ಸಿಗುತ್ತೆ ಅದು ಇದು ಅಂತ ಹೇಳಿ 7,500 ರೂ ಕೊಡುವವರು ಮಾತ್ರ ಈ ಕಡೆ ಬನ್ನಿ, ಎಂದು ಹೇಳಿದರು ಉಳಿದವರ ಕಥೆ, ಮುಖ ಪೆಚ್ಚಾಗಿ ಹಣ ಇಲ್ಲದವರಿಗೆ ಮಾತಾನಾಡಿಸುವ ಗೋಜಿಗೆ ಹೋಗದೇ, ಸುಮ್ಮನಿದ್ದುಬಿಟ್ಟರು. ನಾವುಗಳು ಇಂಗು ತಿಂದ ಮಂಗಗಳಂತಾಗಿ, ದಾವಣಗೆರೆ ರೈಲು ಹತ್ತಿ ಬಂದೆವು. ಮಾರನೇಯ ದಿನ ಫೋನ್ ಮಾಡಿ, ನಮ್ಮ ಬಳಿ 10 ವರ್ಷದಿಂದ ಕೂಡಿಟ್ಟಿರುವ 90 ಸಾವಿರ ಹಣ ಇದೆ. ಇದನ್ನು ಹೇಗೆ ಎಲ್ಲಿ ಷೇರು ಮಾರುಕಟ್ಟೆಗೆ ಹಾಕಬೇಕು. ನಮಗೆ ಕಾರ್ಯಾಗಾರದಲ್ಲಿ ಭಾಗವಹಿಸಿಲು ಸಾಧ್ಯವಾಗಲಿಲ್ಲ. (7 ವರೆ ಸಾವಿರ ಕೊಡುವಷ್ಟು ಶಕ್ತರಾಗಿರಲಿಲ್ಲ) ದಯವಿಟ್ಟು ಒಂದಷ್ಟು ಸಲಹೆ ನೀಡಿ ಅಂತ ಕೇಳಿಕೊಂಡೆ. "ಆ ಕಡೆಯ ಉತ್ತರ - ವರ್ಕ್ ಷಾಪ್ ಗೆ ಸೇರಿದವರಿಗೇ ಮಾತ್ರ" ನಾವು ಸಲಹೆ ಕೊಡುತ್ತೇವೆ. ಪೋನ್ ಮಾಡಬೇಡಿ ಅನ್ನೋ ಮಾತು.
ಟಿವಿ-9 ನಲ್ಲಿ ಶೇರು ಮಾರುಕಟ್ಟೆಯಲ್ಲಿ ಹಣ ಮಾಡೋದು ಹೇಗೆ ಅದರಿಂದ ಮುಂದಿನ ಜೀವನ ಸುಗಮವಾಗಿಸಬಹುದು ಅಂತ ಆಸೆ ಹುಟ್ಟಿಸಿದ್ದವರು ನಮ್ಮ ಡಾ|| ಭರತ್ ಚಂದ್ರರವರು, ಅವರ ಸೆಮಿನಾರ್ ನಲ್ಲಿ ಇನ್ನಷ್ಟು ಆಸೆಯನ್ನು ತೋರಿಸಿ, ಕೈಬಿಟ್ಟಿದ್ದರು. ಆ ಗುಂಗಿನಲ್ಲಿ, ನಾನು ಅಲ್ಪಸ್ವಲ್ಪ ತಿಳಿದಿದ್ದ, ವಿವರಗಳೊಂದಿಗೆ "ಜೀಯೋಜಿತ್" ನಲ್ಲಿ ಡೆಮ್ಯಾಟ್ ಅಕೌಂಟ್ ಮಾಡಿಸಿ, ನನ್ನ ಹತ್ತು ವರ್ಷದ ಪೈಸೆ ಪೈಸೆ ಕೂಡಿಟ್ಟು ಕಾಪಾಡಿಕೊಂಡು ಬಂದಿದ್ದ ಅಷ್ಟೂ ಹಣವನ್ನು, ಶೇರು ಮಾರುಕಟ್ಟೆಯ ಷೇರುಗಳ ಮೇಲೆ ಹೂಡಿದೆ. ಆವತ್ತು ಹೂಡಿದ್ದ ನನ್ನ ದುಡಿಮೆಯ 90 ಸಾವಿರ ರೂಪಾಯಿಗಳು ಕರಗುತ್ತಾ ಕರಗುತ್ತಾ 50 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಳ್ಳುತ್ತಾ ಇದ್ದೇನೆ. ಇಂದಿಗೂ ಸಹ, ಇದರ ಬಗ್ಗೆ ಡಾ|| ಭರತ್ ಚಂದ್ರ ರವರಿಗೆ ಸಾಕಷ್ಟು ಪತ್ರಗಳನ್ನು ಬರೆದು "ಈ ರೀತಿಯಾಗಿ ಹಣ ಕಳೆದುಕೊಳ್ಳುತ್ತಿದ್ದೇನೆ, ನನ್ನ ಜೀವನದ ಮುಂದೆ ಇದ್ದ ಆಧಾರವೇ ಅದಾಗಿದೆ. ದಯವಿಟ್ಟು ಸಲಹೆ ನೀಡಿ, ನಿಮ್ಮ ಮಾತುಗಳಿಂದ ಪ್ರಬಾವಿತನಾಗಿ, ಟಿವಿ-9 ನ ಕಾರ್ಯಕ್ರಮದಲ್ಲಿ ನೋಡಿ ನಂಬಿಕೆಯಿಂದ ನಿಮ್ಮ ಬಳಿ ಬಂದೆ ನೀವು ನಿಮ್ಮ ವರ್ಕ್ ಷಾಪ್ ಹೇಸರಿನಲ್ಲಿ ಹಣ ಕೇಳಿದಿರಿ. ಅದನ್ನು ಕೊಡಲು ಸಾಧ್ಯವಾಗದೇ, ನಿಮ್ಮ ಮಾತಿನ ಪ್ರಭಾವದಿಂದ ನನಗೆ ತಿಳಿದಿದ್ದ, ಷೇರುಗಳ ಮೇಲೆ ಹಣ ಹೂಡಿ, ಹಣ ಕಳೆದುಕೊಳ್ಳುತ್ತಿದ್ದೇನೆ. ತಿಳಿದೋ ತಿಳಿಯದೇಯೋ ಶೇರು ಮಾರುಕಟ್ಟೆಗೆ ಬಂದು ಬಿಟ್ಟೆ ನನ್ನ ಹಣ ವಾಪಸ್ ಬಂದರೆ ಸಾಕು ಶೇರು ಮಾರುಕಟ್ಟೆಗೆ ಕೈಮುಗಿಯುತ್ತೇನೆ ದಯವಿಟ್ಟು ಸಹಾಯ ಮಾಡಿ, ನಾನೊಬ್ಬ ಅಂಗವಿಕಲ ವ್ಯಕ್ತಿ, ನನ್ನ ನಂಬಿ ನನ್ನ ಕುಟುಂಬ ಇದೆ. ಅಂತ ಅಂಗಲಾಚಿದೆ, ಬೇಡಿಕೊಂಡೆ, ತಮ್ಮ ಸಹಾಯಕರ ಕಡೆಯಿಂದ ಪೋನ್ ಮಾಡಿಸಿ, ನನ್ನ ಶೇರು ವಿವರಗಳನ್ನು ಕೇಳಿದರೂ ಎಲ್ಲರದರ ವಿವರ ಕೊಟ್ಟೆ. ತಾವು ಸಲಹೆ ಕೊಡುತ್ತೇವೆ ಅಂತ ಹೇಳಿದವರು, ಕಾಯಿರಿ ಅಂತ ಹೇಳಿದವರು ಇಂದಿಗೂ ಅವರ ಮಾತಿಗೆ ನಂಬಿ ಕೂತಿದ್ದೇನೆ. ಪ್ರತಿದಿನವೂ ನನ್ನ ಹಣ ಕರಗುತ್ತಲೇ ಇದೆ.ಮನಸ್ಸು ನೋವು ತಡೆಯಲಾರದೇ, ಇದೇ ವಿಷಯಕ್ಕೆ ನಮ್ಮ ಮನೆಯಲ್ಲಿ ಕಲಹ ಹೆಚ್ಚಾಗಿ ಈ ಲೋಕವನ್ನೇ ಬಿಟ್ಟು ಹೋಗುವ ನಿರ್ಧಾರವನ್ನೂ ಸಹ ಮಾಡಿಕೊಂಡೆ. (ನನ್ನ ಮರಣ ನಂತರ ನನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನವಾಗಿ ಬರೆದುಕೊಟ್ಟಿದ್ದೇನೆ) ಭರತ್ ಚಂದ್ರರಿಗೆ ಇನ್ನಷ್ಟು ಪತ್ರಗಳನ್ನು ಬರೆದೆ.
ಅದಕ್ಕೆ ಅವರ ಕೊಡುಗೆ ಮತ್ತು ಉತ್ತರ :
ಯಾರೋ ಇಬ್ಬರೂ ವ್ಯಕ್ತಿಗಳು ನನ್ಗೆ ದೂರವಾಣಿ ಮಾಡಿ ನಾವು ಲೋಕಾಯುಕ್ತ ಪೋಲೀಸರು ಡಾ|| ಭರತ ಚಂದ್ರರವರಿಗೆ ಪತ್ರ ಬರೆಯುತ್ತಿರಂತೆ, ಫೇಸ್ ಬುಕ್ನಲ್ಲಿ ಬರೀತೀರಂತೆ. ಅವರು ದೊಡ್ಡವರು ಹಣವಂತರು, ನಿಮ್ಮ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಎಲ್ಲಿದೆ ನಿಮ್ಮ ಮನೆ ನಿಮ್ಮ ಐಡಿ ಕಾರ್ಡ್ ಇದೆಯಾ? ಅವರು ನಿಮ್ಮ ಮೇಲೆ 2 ಲಕ್ಷ ರೂ ಮಾನ ನಷ್ಟ ಮೊಕದ್ದಮೆ ಹೂಡುತ್ತಾರೆ. ಹುಷಾರ್ !! ಎಂದು ಫೋನ್ ಕರೆಗಳನ್ನು ಮಾಡಿದರು. ಮತ್ತೊಬ್ಬರು, ನೀನು ಈಗಾಗಲೇ ಕಾಲು ಊನ ಮಾಡಿಕೊಂಡು ಕುಂಟನಂತೆ, ನೀವು ಚೆನ್ನಾಗಿರಬೇಕು ಅಂದರೆ ಸುಮ್ಮನಿರಬೇಕು. ಅವರು ಸಾವಿರ ಹೇಳುತ್ತಾರೆ. ಹಣ ಕಳೆದುಕೊಂಡಿದ್ದು ನಿನ್ನ ತಪ್ಪು ಅವರನ್ನು ಯಾಕೆ ದೂಷಿಸುತ್ತಿಯಾ ? ಎಂದು ಗಟ್ಟಿ ದನಿಯಲ್ಲಿ ಮಾತಾನಾಡುತ್ತಾ ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಸಾವಿಗೆ ಅಂಜಿಕೆ ಇಲ್ಲ. ಸಾಯಲು ಇಂದೂ ತಯಾರಾಗಿದ್ದೇನೆ. ಆದರೆ ನಾನು ಅಂಗವಿಕಲನಾದರೂ, ಯಾರ ಬಳಿಯೂ ಕೈಯೊಡ್ಡದೇ, ಸ್ವತಂತ್ರವಾಗಿ, ಸ್ವಾಭಿಮಾನಿಯಾಗಿ, ಕಷ್ಟಪಟ್ಟು ದುಡಿದು ಜೀವಿಸುತ್ತಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ನನ್ನ ಕೈಯಲ್ಲಾದ ದಾರಿ ಮಾಡಬೇಕಲ್ಲ, ಅದಕ್ಕಾಗಿ ಜೀವಿಸುತ್ತಿದ್ದೇನೆ. ಇನ್ನಷ್ಟು ಕಷ್ಟಗಳು ಬಂದರೂ ಎದುರಿಸುತ್ತೇನೆ. ಕೊನೆಗೆ ಏನೂ ಆಗಲಿಲ್ಲ ಅಂದಾಗ ನಾನು ನನ್ನ ಹೆಂಡತಿ ಇಬ್ಬರೂ ಈ ಲೋಕವನ್ನೇ ಬಿಟ್ಟು ಹೊರಡಲು ಸಿದ್ದರಿದ್ದೇವೆ. ಡಾ|| ಭರತ ಚಂದ್ರರಿಗೆ ಅವರು ಹಣಮಾಡುವುದನ್ನು ಹೇಳಿಕೊಟ್ಟು ಜನರಿಗೆ ಅನುಕೂಲ ಮಾಡುತ್ತಾರೋ ಇಲ್ಲವೋ ತಾವು ಚೆನ್ನ್ನಾಗಿದ್ದಾರೆ. ಚೆನ್ನಾಗಿರಲೀ.ಅವರು ಉತ್ತಮ ವಾಗ್ಮಿಗಳು, ಆದರೆ ನನ್ನ ಕೊರಗು ಒಂದೇ ಹತ್ತಾರು ಪತ್ರಗಳನ್ನು, ಬರೆದರೂ, ಫೋನ್ ನಲ್ಲಿ ಕಷ್ಟ ಹೇಳಿಕೊಂಡರು, ಶೇರು ಮಾರುಕಟ್ಟೆಯ ಭೀಷ್ಮ ರಂತಿರುವ, ಉಪನ್ಯಾಸಕರಾಗಿರುವ, ಬುದ್ದಿವಂತರೂ ಆಗಿರುವ ಅವರು ನಾನು ಹಣ ಕಳೆದುಕೊಳ್ಳುತ್ತಿದ್ದೇನೆ. ಕೈ ಹಿಡಿದು ಸಹಾಯ ಮಾಡಿ ಅಂತ ಗೋಗೆರೆದರೂ "ನಾನು ಸಿಲುಕಿರುವ ವ್ಯೂಹದಿಂದ ಹೊರಬರಲು ದಾರಿ ಸೂಚಿಸಿ ಮಹಾನ್ ಆಗಬಹುದಿತ್ತು. ಒಂದು ಅಂಗವಿಕ ಲ ವ್ಯಕ್ತಿಗೆ ಅವನ ಕುಟುಂಬಕ್ಕೆ ಸಹಾಯ ಮಾಡಬಹುದಿತ್ತು" ಇದ್ಯಾವುದೂ ಮಾಡದೇ ಎರಡನೇ-ಮೂರನೇ ವ್ಯಕ್ತಿಗಳಿಂದ ಫೋನ್ ಮಾಡಿಸಿ, ಪೋಲೀಸರು ಎಂಬ ಹೆಸರಿನಲ್ಲಿ ಭಯ ಹುಟ್ಟಿಸುವಂತಹ ಕೆಲಸ ಯಾಕೆ ಮಾಡಿದರೋ "
ನಾನು ಇವತ್ತಿಗೂ ಸಾಮಾಜಿಕ ಕಳಕಳಿಯ ಬಗ್ಗೆ ಎಚ್ಚರ ದಿಂದ ನೋಡುತ್ತೇನೆ. ನಮ್ಮ ಭಾಷೆ ಕನ್ನಡದ ಬಗ್ಗೆ ಅಭಿಮಾನ ಇದೆ. ನಿಮ್ಮ ವಾಹಿನಿಯಲ್ಲೂ ಕನ್ನಡ ಕಾಗುಣಿತ ತಪ್ಪಾದಾಗ ಪತ್ರಗಳನ್ನು ಬರೆದಿದ್ದೇನೆ. ನಿಮ್ಮ ನಿರೂಪಕರಿಗೂ ವಿನಂತಿಸಿಕೊಂಡಿದ್ದೇನೆ. ಭ್ರಷ್ಟಾಚಾರದ ಬಗ್ಗೆ ನನಗೆ ತಿಳಿದಿರುವ ಲೇಖನಗಳನ್ನು ಬ್ಲಾಗ್ ಮೂಲಕ ಬರೆದು ತಿಳಿಸಿದ್ದೇನೆ. ಅನ್ಯಾಯವನ್ನು ಮುಚ್ಚು ಮರೆಯಿಲ್ಲದೇ ಹೇಳುತ್ತಿದ್ದೇನೆ. RTI (ಮಾಹಿತಿ ಹಕ್ಕು ಕಾಯ್ದೆ) ಅಡಿಯಲ್ಲಿ ಭ್ರಷ್ಟರನ್ನು ಬಯಲು ಮಾಡೋಣ ಬನ್ನಿ.. ಎಂಬ ಗುಂಪನ್ನು ಫೇಸ್ ಬುಕ್ ನಲ್ಲಿ ಮಾಡಿದ್ದೇನೆ. ನಾನು ಸ್ವಯಂ ಪ್ರೇರಿತನಾಗಿ "RTI ಕಾರ್ಯಕರ್ತ" ನಾಗಿದ್ದೇನೆ. "ಪತ್ರಕರ್ತ ಬಂಧುಗಳೇ ಭ್ರಷ್ಟಾಚಾರ ನಿರ್ಮೂಲನೆ ನಿಮ್ಮ ಕೈಯಲ್ಲಿದೆ" "ಭ್ರಷ್ಟಾಚಾರ ಮುಕ್ತ ರಾಜ್ಯ..." ಎಂಬ ಲೇಖನಗಳನ್ನು ಗುಂಪುಗಳನ್ನು ಮಾಡಿ, ನಮ್ಮ ಕುರುಬ ಸಮಾಜದ ಜಾಗೃತಿಗಾಗಿ ನಮ್ಮ ಜನಾಂಗಕ್ಕೆ ನನ್ನಿಂದಾಗುವ ಅಲ್ಪ ಕಾಣಿಕೆಗಾಗಿ "ಕುರುಬರ ಬಾಂಧವ್ಯ" ಎಂಬ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಮಾಡಿ, ಅದೇ ಹೆಸರಿನಲ್ಲಿ ಜನಾಂಗದವರಿಗಾಗಿ ಒಂದು ಸಣ್ಣ ಪತ್ರಿಕೆಯನ್ನೂ ಹೊರತರುವ ಯೋಚನೆಯಲ್ಲಿದ್ದೇನೆ. ಸಮಾಜಕ್ಕೆ ಜಾಗೃತಿ ಮೂಡಿಸಲು ನನ್ನ ರಾಜ್ಯಕ್ಕೆ ನನ್ನ ದೇಶಕ್ಕೆ ನನ್ನಿಂದ ಆಗುವ ಅಲ್ಪ ಸೇವೆ ಮಾಡುತ್ತಿದ್ದೇನೆ.
ಈಗಲೂ ಸಹ ನಾನು ನನ್ನ ಸ್ವಾರ್ಥಕ್ಕೆ ಬರೆಯುತ್ತಿಲ್ಲ.
ಡಾ|| ಭರತ್ ಚಂದ್ರರವರ ಮಾತುಗಳು ಎಂತವರನ್ನೂ ತಮ್ಮತ್ತ ಸೆಳೆಯುವ ಮಾತುಗಾರಿಗೆ ಇದೆ. ಅಂತಹ ಆಕರ್ಷಣೆ ಯೂ ಅವರಿಗೆ ದೇವರು ಕೊಟ್ಟ ವರ.
ಅವರ ಮಾತುಗಳಿಗೆ ಮರುಳಾಗಿ ಹಣ ಮಾಡುವ ಒಳ್ಳೆಯ ಮಾರ್ಗ ತೋರಿಸುತ್ತಿದ್ದಾರೆ ಅಂತ ಆಸೆ ಪಟ್ಟು ಷೇರು ಮಾರುಕಟ್ಟೆಯ ಬಗ್ಗೆ ತಿಳಿಯದ ನನ್ನಂತಹ ಎಷ್ಟೋ ಅಮಾಯಕರು ಬಲಿಯಾಗುವ ಸಾಧ್ಯತೆ ಬಹಳ ಇದೆ. ನಗರ, ಪಟ್ಟಣಗಳಲ್ಲಿ ವಿದ್ಯಾವಂತರು ಷೇರು ಮಾರುಕಟ್ಟೆಯ ಬೆನ್ನೇರಿ ಹಣ ಮಾಡುತ್ತಿದ್ದಾರೋ, ಗಳಿಸುತ್ತಿದ್ದಾರೋ ತಿಳಿಯದು.
ಆದರೆ ಸುವರ್ಣ ವಾಹಿನಿಯನ್ನು ರಾಜ್ಯದ ಎಲ್ಲಾ ಭಾಗಗಳಲ್ಲೂ ನೋಡುತ್ತಾರೆ.ಹಣವೆಂದರೆ ಆಸೆ ಪಡುವ ಜನರು ಅವಿದ್ಯಾವಂತರು ಇವರ ಮಾತಿಗಳಿಗೆ ಮರುಳಾಗಿ, ಶೇರು ಮಾರುಕಟ್ಟೆಯ ವ್ಯವಹಾರಕ್ಕೆ ಇಳಿದರೆ. ನನ್ನಂತೆಯೇ ಮಾನಸಿಕವಾಗಿ ಕೊರಗಬೇಕಾಗುತ್ತೆ.
ಡಾ|| ಭರತ್ ಚಂದ್ರರವರು ಉಚಿತ ಸೆಮಿನಾರ್ ಗಳನ್ನು ಮಾಡಿ, ಜನರಿಗೆ ತಿಳಿಸುತ್ತಾರೆ ನಿಜ ಅದೆಷ್ಟು ಜನ ನನ್ನಂತಹ ವ್ಯಕ್ತಿಗಳಿಗೆ 7500 ರಷ್ಟು ಹಣ ಕೊಟ್ಟು ಕಾರ್ಯಾಗಾರ (ವರ್ಕ್ ಷಾಪ್) ಗಳಲ್ಲಿ ಸೇರಿಕೊಳ್ಳಲು ಸಾಧ್ಯ. ಇಂತಹ ಕಾರ್ಯಕ್ರಮಗಳಿಂದ ಯಾರಿಗೆ ಲಾಭ?
ಈ ಪತ್ರವನ್ನು ಸಹ ಸಾಮಾಜಿಕ ಕಳಕಳಿಯಿಂದಲೇ ಬರೆಯುತ್ತಿದ್ದೇನೆ. ಕಳೆದ ಆಗಸ್ಟ್ 2010 ರಿಂದ ಇವತ್ತಿಗೂ ಸಹ ನಾನು ತೊಡಗಿಸಿದ್ದ 90 ಸಾವಿರ ಕರಗುತ್ತಲೇ ಇದೆ. ದಾರಿ ತೋರದೇ ದಿನಾಲೂ ನೋಡುತ್ತಲೇ ಇದ್ದೇನೆ. ನಾನು ನಂಬಿ ಹಾಳಾದ ಹಾಗೆ ಅಮಾಯಕರು ಆಗುವುದು ಬೇಡ.
ಹಣದ ವಿಚಾರದ ಕಾರ್ಯಕ್ರಮಗಳು ಎಂತಹ ಮನುಷ್ಯನನ್ನು ಆಸೆಗೆ ಭೂತಕ್ಕೆ ಬಲಿಯಾಗಿಸುತ್ತದೆ. ಕಾರ್ಯಕ್ರಮ ಎಂತದ್ದೆ ಇರಲೀ. ಹಣ ಬರುತ್ತೆ ಎಂದರೆ ನಾವು ಮಾನವರು ಹಿಂದೆ ಮುಂದೆ ಯೋಚಿಸುವುದಿಲ್ಲ.
ಮನಸ್ಸು ತಡೆಯಲಾರದೇ ಈ ಪತ್ರವನ್ನು ಬರೆಯುತ್ತಿದ್ದೇನೆ. ಅದಿನ್ಯಾರು ಪುಣ್ಯಾತ್ಮರು ಫೋಲೀಸರು ಅಂತ ಹೇಳಿಕೊಂಡು ಫೋನ್ ಮಾಡಿ ಗದರಿಸುತ್ತಾರೋ, ಮಾನ ನಷ್ಟ ಮೊಕದ್ದಮೆ ಕೇಸ್ ಹಾಕಿ ನನ್ನಿಂದ 2 ಲಕ್ಷ ಕ್ಕೆ ದಾವೆ ಹೂಡುತ್ತಾರೋ ಅಥವಾ ಇನ್ನಷ್ಟು ಅಂಗ ಊನ ಮಾಡುತ್ತಾರೋ ನೋಡಬೇಕು.
ರಾಜು ವಿನಯ್ ದಾವಣಗೆರೆ
No comments:
Post a Comment